Tuesday, May 25, 2021

 

ವಾಣಿಜ್ಯ ನ್ಯಾಯಾಲಯ ಕಾಯ್ದೆ, 2015

 

ವಾಣಿಜ್ಯ ವಿವಾದಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಸಲುವಾಗಿ ಕೇಂದ್ರ ಸರಕಾರವು ವಾಣಿಜ್ಯ ನ್ಯಾಯಾಲಯ ಕಾಯ್ದೆಯನ್ನು ರಚಿಸಿ, ಜಿಲ್ಲಾಮಟ್ಟದಲ್ಲಿ ವಾಣಿಜ್ಯ ನ್ಯಾಯಾಲಯ ಮತ್ತು ಉಚ್ಛ ನ್ಯಾಯಾಲಯದಲ್ಲಿ ʼವಾಣಿಜ್ಯ ವಿಭಾಗʼ ವೆಂದು ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ಕ್ರಮ ಕೈಗೊಂಡಿದೆ. ಇದರಿಂದಾಗಿ ವಿಶ್ವಬ್ಯಾಂಕ್‌ ನೀಡುವ ಜಾಗತಿಕ ರ‍್ಯಾಂಕ್ ಪಟ್ಟಿಯಲ್ಲಿ, 2020ನೇ  ವರದಿಯನ್ವಯ ಭಾರತದ ಸಂಖ್ಯೆ 63ಕ್ಕೆ ಜಿಗಿದಿದೆ. ಜಗತ್ತಿನ 190 ರಾಷ್ಟ್ರಗಳಲ್ಲಿ ವ್ಯಾಪಾರ ಸಂಬಂಧಿ ಜಾರಿಯಲ್ಲಿರುವ ವಿವಿಧ ನಿಯಂತ್ರಣ ಕಾನೂನುಗಳನ್ನು ಹಾಗೂ ಇನ್ನಿತರ ಒಟ್ಟು 16 ಅಂಶಗಳನ್ನು ಮಾನದಂಡವಾಗಿ ಪರಿಗಣಿಸಿ, ಸುಲಭವಾಗಿ ವ್ಯಾಪಾರವನ್ನು (Ease of doing business) ನಡೆಸಲು ಲಭ್ಯವಿರುವ ಪೂರಕ ವಾತಾವರಣದ ಮಾನದಂಡದ ಆಧಾರದಲ್ಲಿ ವರ್ಷಕ್ಕೊಮ್ಮೆ ಈ ರ‍್ಯಾಂಕಿಂಗ್‌ನ್ನು ನೀಡಲಾಗುತ್ತದೆ. ವಿದೇಶೀ ನೇರ ಬಂಡವಾಳ ಹರಿದು ಬರಲು ಹಾಗೂ ಹೂಡಿಕೆದಾರರನ್ನು ಆಕರ್ಷಿಸುವ ದೃಷ್ಠಿಯಲ್ಲಿ ಈ ರ‍್ಯಾಂಕಿಂಗ್‌ಗೆ ಭಾರೀ ಮಹತ್ವವಿದೆ. ಯಾವ ದೇಶದಲ್ಲಿ ವಾಣಿಜ್ಯ ಒಪ್ಪಂದಗಳ ಅಡಿಯಲ್ಲಿ ಉದ್ಭವಿಸುವ ವ್ಯಾಜ್ಯಗಳನ್ನು ತ್ವರಿತವಾಗಿ ಹಾಗೂ ಸುಲಭವಾಗಿ ಇತ್ಯರ್ಥಪಡಿಸಲು ನ್ಯಾಯಾಂಗೀಯ ವ್ಯವಸ್ಥೆಯಿದೆಯೋ ಅಂತಹ ದೇಶ ಹೂಡಿಕೆದಾರರಿಗೆ ಹೆಚ್ಚಿನ ಆಕರ್ಷಣೀಯ ತಾಣವಾಗುತ್ತದೆ. ವಿದೇಶೀ ಬಂಡವಾಳವನ್ನು ಆಕರ್ಷಿಸುವ ದೃಷ್ಠಿಯಿಂದ ವಿವಿಧ ದೇಶಗಳು ಈ ವಿಶ್ವಬ್ಯಾಂಕಿನ ರ‍್ಯಾಂಕ್ ಪಟ್ಟಿಯಲ್ಲಿ ಮೊದಲ 50 ರ‍್ಯಾಂಕ್‌ಗಳಲ್ಲಿ ಸ್ಥಾನ ಪಡೆಯಲು ಯತ್ನಿಸುತ್ತಿವೆ.

 

2020ರ ವಿಶ್ವಬ್ಯಾಂಕ್‌ನ ವರದಿಯನ್ವಯ ನ್ಯೂಜಿಲ್ಯಾಂಡ್‌ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದ್ದರೆ, ಸಿಂಗಾಪುರ ಎರಡನೇ ಸ್ಥಾನದಲ್ಲಿದ್ದು, ಹಾಂಕಾಂಗ್‌ ಮೂರನೇ ಸ್ಥಾನವನ್ನು ಪಡೆದಿದೆ. 190 ದೇಶಗಳ ಈ ಪಟ್ಟಿಯಲ್ಲಿ 2018ನೇ ಇಸವಿಯಲ್ಲಿ ಭಾರತವು 100ನೇ ರ‍್ಯಾಂಕ್‌ ನ್ನು ಪಡೆದಿದ್ದರೆ, 2019ರಲ್ಲಿ 77ನೇ ರ‍್ಯಾಂಕ್‌ ನ್ನು ಪಡೆದಿದ್ದು, 2020ರ ವರದಿಯನ್ವಯ ಹಲವಾರು ಸುಧಾರಣಾ ಕ್ರಮಗಳ ಪರಿಣಾಮವಾಗಿ 63ನೇ ಸ್ಥಾನಕ್ಕೆ ನೆಗೆದಿದೆ. ಈ ಹಿನ್ನೆಲೆಯಲ್ಲಿ ಸ್ಥಾಪನೆಗೊಂಡ ವಾಣಿಜ್ಯ ನ್ಯಾಯಾಲಯಗಳು ವಾಸ್ತವದಲ್ಲಿ ಎಷ್ಟು ಯಶಸ್ವಿಯಾಗಿ ಹಾಗೂ ದಕ್ಷವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಪರೀಶೀಲಿಸಿದರೆ ಕರ್ನಾಟಕ ರಾಜ್ಯದ ಮಟ್ಟಿಗಂತೂ ನಿರಾಶಾದಾಯಕವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರಗಳು ಅನಾಸಕ್ತಿ ತೋರಿರುವುದು ಹಾಗೂ ವಿಶೇಷ ನ್ಯಾಯಾಲಯಗಳ ಸ್ಥಾಪನೆಯನ್ನು ಮಾಡದೆ ಈಗಿರುವ ಜಿಲ್ಲಾ ನ್ಯಾಯಾಧಿಶರುಗಳಿಗೆ ಹೆಚ್ಚುವರಿ ಹೊಣೆಯನ್ನು ನೀಡುವ ಮೂಲಕ ಪ್ರಕರಣಗಳು ಮತ್ತಷ್ಟು ವಿಳಂಬವಾಗಲು ಕಾರಣವಾಗಿರುವುದು ಒಂದು ದುರಂತವೇ ಸರಿ.

 

ಈ ಕಾಯ್ದೆಯಡಿಯಲ್ಲಿ ವ್ಯಾಜ್ಯಗಳು 6 ತಿಂಗಳುಗಳ ಒಳಗಾಗಿ ಕಡ್ಡಾಯವಾಗಿ ಇತ್ಯರ್ಥಗೊಳ್ಳಬೇಕೆಂದು ಕಾಲಮಿತಿಯನ್ನು ನಿಗದಿಪಡಿಸಲಾಗಿದೆ. ಆದರೆ, ವ್ಯಾಜ್ಯಗಳು ನಾಲ್ಕೈದು ವರ್ಷಗಳಿಂದ ಸಾಂಪ್ರದಾಯಿಕ ಸಿವಿಲ್‌ ನ್ಯಾಯಾಲಯದ ಪ್ರಕರಣಗಳಂತೆ ಬಾಕಿ ಉಳಿದಿರುವುದು ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ಪ್ರಮುಖ ಕಾರಣ ಈ ಹಿಂದೆ ವಾಣಿಜ್ಯ ನ್ಯಾಯಾಲಯಗಳಲ್ಲಿ ವಿಚಾರಣೆಯನ್ನು ಕೈಗೆತ್ತಿಕೊಳ್ಳುವ ವ್ಯಾಜ್ಯಗಳ ಮೌಲ್ಯವು ಕನಿಷ್ಠ ಒಂದು ಕೋಟಿ ಇರಬೇಕಾಗಿತ್ತು. ಆದರೆ 2018ನೇ ಇಸವಿಯಲ್ಲಿ ಕಾಯ್ದೆಗೆ ತಿದ್ದುಪಡಿಯನ್ನು ತಂದ ಕೇಂದ್ರ ಸರಕಾರವು ಈ ಮಿತಿಯನ್ನು ಮೂರು ಲಕ್ಷಕ್ಕೆ ಇಳಿಸಿದುದ್ದರ ಪರಿಣಾಮವಾಗಿ ಸಿವಿಲ್‌  ನ್ಯಾಯಾಲದಲ್ಲಿ ಬಾಕಿ ಇದ್ದ ಸಹಸ್ರಾರು ಪ್ರಕರಣಗಳು ಏಕಾಏಕಿಯಾಗಿ ವಾಣಿಜ್ಯ ನ್ಯಾಯಾಲಯಕ್ಕೆ ವರ್ಗಾವಣೆಗೊಂಡವು. ಒಂದೆಡೆ ಈ  ವರ್ಗಾವಣೆ ಪ್ರಕ್ರಿಯೆಯೇ ಸುಮಾರು ಒಂದರಿಂದ ಎರಡು ವರ್ಷಗಳ ಕಾಲ ನಡೆದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತು. ಇನ್ನೊಂದೆಡೆ ಜಿಲ್ಲಾ ನ್ಯಾಯಾಧೀಶರು ಮೂರು ಲಕ್ಷ ಮೌಲ್ಯದ ಸಣ್ಣಪುಟ್ಟ ವಾಣಿಜ್ಯ ವ್ಯಾಜ್ಯಗಳನ್ನು ಸಹ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕಾಗಿ ಬಂದಿರುವುದು ಪ್ರಕರಣಗಳ ಸಂಖ್ಯೆ ಹೆಚ್ಚಲು ಕಾರಣವಾಯಿತು. ಅಲ್ಲದೆ, ಕಾಯ್ದೆ ಜಾರಿಗೆ ಬಂದ ಆರಂಭದಲ್ಲಿ ಕರ್ನಾಟಕ ರಾಜ್ಯ ಸರಕಾರವು ಸಾಕಷ್ಟು ಸಂಖ್ಯೆಯಲ್ಲಿ ವ್ಯಾಜ್ಯಗಳಿಲ್ಲವೆಂಬ ಕಾರಣಕ್ಕಾಗಿ ಜಿಲ್ಲೆಗೊಂದರಂತೆ ಸ್ಥಾಪಿಸಬೇಕಾದ ವಿಶೇಷ ನ್ಯಾಯಾಲಯಗಳ ಬದಲಾಗಿ ಇಡೀ ರಾಜ್ಯಕ್ಕೆ ಎರಡೇ ನ್ಯಾಯಾಲಯಗಳನ್ನು ರಾಜಧಾನಿ ಬೆಂಗಳೂರಿನಲ್ಲೇ ಸ್ಥಾಪಿಸುವ ಮೂಲಕ ಗೊಂದಲವನ್ನು ಸೃಷ್ಟಿಸಿತು. ಈ ಹಂತದಲ್ಲಿ ರಾಜ್ಯಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿದ್ದ  ಎಲ್ಲಾ ವಾಣಿಜ್ಯ ವಿವಾದಗಳ ಪ್ರಕರಣಗಳನ್ನು ಬೆಂಗಳೂರಿನಲ್ಲಿ ಸ್ಥಾಪಿತವಾದ ವಿಶೇಷ ನ್ಯಾಯಾಲಯಗಳಿಗೆ ವರ್ಗಾವಣೆಗೊಳಿಸಿತು.

 

ತದನಂತರ ವಕೀಲರಿಂದ, ಸಾರ್ವಜನಿಕರಿಂದ, ಅದರಲ್ಲೂ ವಿಶೇಷವಾಗಿ ವಾಣಿಜ್ಯೋದ್ಯಮಿಗಳ ಒತ್ತಾಯಕ್ಕೆ ಮಣಿದು ಆ ಎಲ್ಲಾ ಪ್ರಕರಣಗಳನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯಗಳಿಂದ ಮತ್ತೆ ಪುನಃ ಜಿಲ್ಲಾ ನ್ಯಾಯಾಲಯಗಳಿಗೆ ವರ್ಗಾವಣೆ ಮಾಡಿತು. ಈ ಎರಡು ಹಂತದ ಅವೈಜ್ಞಾನಿಕ ವರ್ಗಾವಣಾ ಪ್ರಕ್ರಿಯೆಯಲ್ಲಿ ಸಾಕಷ್ಟು ಸಮಯ ನಷ್ಟವಾದವು. ಈತನ್ಮಧ್ಯೆ, ಹೊಸದಾಗಿ ಸ್ಥಾಪನೆಯಾದ ವಾಣಿಜ್ಯ ನ್ಯಾಯಾಲಯಗಳ ಕಲಾಪಗಳ ಕುರಿತ ನಿಯಮಗಳ ಬಗ್ಗೆ ಸ್ಪಷ್ಟತೆ ಇಲ್ಲದಿರುವುದರಿಂದ ನ್ಯಾಯಾಧೀಶರಿಗೂ ಹಾಗೂ ವಕೀಲರಿಗೂ ನ್ಯಾಯಶಾಸ್ತ್ರೀಯ ತಪ್ಪುಗಳ ಸಮಸ್ಯೆ ಎದುರಾಯಿತು.

 

    ಒಟ್ಟಾರೆಯಾಗಿ ಕಳೆದ ಆರು ವರ್ಷಗಳಿಂದ ದಾಖಲಾಗಿರುವ ಸಹಸ್ರಾರು ವಾಣಿಜ್ಯ ವಿವಾದಗಳು ಇತ್ಯರ್ಥಗೊಳ್ಳದೆ ಉದ್ಯಮ ವಲಯದ ಕಕ್ಷಿಗಾರರಿಗೆ ಇನ್ನಿಲ್ಲದ ಸಮಸ್ಯೆ ಉಂಟಾಯಿತು. ಈತನ್ಮಧ್ಯೆ, ಆರ್ಥಿಕ ಸ್ಥಿತಿ ಹದಗೆಟ್ಟಿದುದರಿಂದ ವಾಣಿಜ್ಯ ವಲಯದಲ್ಲಿ ಮತ್ತೆ ಹಲವು ಸಾವಿರ ಪ್ರಕರಣಗಳು ಉದ್ಭವಿಸಿ ವಾಣಿಜ್ಯ ನ್ಯಾಯಾಲಯದ ಮೆಟ್ಟಿಲೇರಿದವು. ಇದರಿಂದಾಗಿ ವಿಶೇಷ ನ್ಯಾಯಾಲಯದ ಮೇಲಿನ ಒತ್ತಡಗಳು ಹೆಚ್ಚಾಗಿ ಪ್ರತಿನಿತ್ಯ ವಿಚಾರಣೆ ನಡೆಸಿದರೂ ಸಹ ಆರು ತಿಂಗಳುಗಳ ಒಳಗಾಗಿ ತೀರ್ಪನ್ನು ನೀಡಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿಯಿತು. ಕೇವಲ ಸರಕಾರದ ಅವಜ್ಞೆಯಿಂದ ದೇಶದ ನ್ಯಾಯಾಂಗ ವ್ಯವಸ್ಥೆಯು ವಾಣಿಜ್ಯ ವಿವಾದಗಳನ್ನು ಸಕಾಲಿಕವಾಗಿ ಇತ್ಯರ್ಥ ಪಡಿಸುವಲ್ಲಿ ತೋರಬೇಕಾದ ನಿರೀಕ್ಷಿತ ದಕ್ಷತೆಯನ್ನು ತೋರಲಾಗದೆ ಕಾಯ್ದೆಯ ಉದ್ದೇಶವನ್ನೇ ಅಣಕಿಸುವಂತಾಯಿತು.

 

       2020ನೇ ಇಸವಿಯಲ್ಲಿ ಅತೀ ಹೆಚ್ಚು ಜಾಗತಿಕ ಬಂಡವಾಳ ಹೂಡಿಕೆಯನ್ನು ಗಳಿಸಿದ ರಾಷ್ಟ್ರಗಳಲ್ಲಿ ಭಾರತಕ್ಕೆ ಮೂರನೇ ಸ್ಥಾನ ಲಭ್ಯವಾಗಿದೆ. ಇದು ಭಾರತದ ಮೇಲೆ ವಿಶ್ವದ ವಾಣಿಜ್ಯೋದ್ಯಮಿಗಳು ಇಟ್ಟಿರುವ ನಂಬಿಕೆಯ ದ್ಯೋತಕ. 2020ನೇ ಇಸವಿಯಲ್ಲಿ ಭಾರತಕ್ಕೆ ಹರಿದು ಬಂದ ಒಟ್ಟು ವಿದೇಶೀ ನೇರ ಬಂಡವಾಳ (FDI) ನ ಒಟ್ಟು ಮೊತ್ತ ಸರಿ ಸುಮಾರು 67.54 ಬಿಲಿಯನ್‌ ಡಾಲರ್‌. ಹಾಗಾಗಿ, ವಾಣಿಜ್ಯ ನ್ಯಾಯಾಲಯಗಳಂತಹ ಪ್ರಮುಖ ಸಾಂಸ್ಥಿಕ ಸಂಸ್ಥೆಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಸರಕಾರಗಳು ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕು. ಕರಾರುಗಳನ್ನು ಕಾನೂನಿನ ಚೌಕಟ್ಟಿನೊಳಗೆ ದಕ್ಷವಾಗಿ ಹಾಗೂ ತ್ವರಿತವಾಗಿ ಜಾರಿಗೊಳಿಸಲು ಪೂರಕವಾಗಿ ಜಿಲ್ಲಾ ವಾಣಿಜ್ಯ ನ್ಯಾಯಾಲಯಗಳ ಯಶಸ್ವೀ ನಿರ್ವಹಣೆಯ ಕುರಿತು ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆ, ಹಣಕಾಸು ಇಲಾಖೆ ಹಾಗೂ ಕಾನೂನು ಇಲಾಖೆಗಳು ಜಂಟಿಯಾಗಿ ಕೆಲಸ ಮಾಡಬೇಕು.

 

ಈ ಹಿನ್ನೆಲೆಯಲ್ಲಿ, ರಾಜ್ಯ ಸರಕಾರವು ತಕ್ಷಣವೇ ಈ ಕೆಳಗಿನ ವಿಶೇಷ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ವಾಣಿಜ್ಯ ನ್ಯಾಯಾಲಯಗಳ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಾಗಿದೆ.

 

1.    ಪ್ರತೀ ಜಿಲ್ಲೆಗಳಲ್ಲಿ ವಾಣಿಜ್ಯ ವ್ಯಾಜ್ಯಗಳನ್ನು ತೀರ್ಮಾನಿಸಲು ಜಿಲ್ಲಾ ನ್ಯಾಯಾಧೀಶರಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡದೆ, ಪ್ರತ್ಯೇಕ ವಿಶೇಷ ನ್ಯಾಯಾಲಯವನ್ನು ಸ್ಥಾಪನೆ ಮಾಡಬೇಕು.

 

2.   ಸದರಿ ಕಾಯ್ದೆಯಡಿಯಲ್ಲಿ ನಿರ್ದೇಶಿಸಿದಂತೆ ಆರು ತಿಂಗಳ ಒಳಗಾಗಿ ಕಡ್ಡಾಯವಾಗಿ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲು ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಿ ನ್ಯಾಯಾಧೀಶರಿಗೆ ಹಾಗೂ ವಕೀಲರಿಗೆ ವಿಶೇಷ ತರಬೇತಿ ನೀಡಿ, ಕಾಯ್ದೆಯನ್ನು ಜನಪ್ರಿಯಗೊಳಿಸುವುದರೊಂದಿಗೆ‌ ತ್ವರಿತ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು.

 

3. ವಾಣಿಜ್ಯ ವಿವಾದ ಸಂಬಂಧಿತ ಪ್ರಕರಣಗಳು ಅತ್ಯಂತ ಸಂಕೀರ್ಣವಾಗಿರುವುದರಿಂದ ವಿಶೇಷ ತಜ್ಞತೆ ಹೊಂದಿದ ನ್ಯಾಯಾಧೀಶರ ಅಗತ್ಯವಿದೆ. ಹಾಗಾಗಿ ರಾಷ್ಟ್ರೀಯ ಕಂಪೆನಿ ಕಾನೂನು ಮಂಡಳಿ ಹಾಗೂ ಆದಾಯ ತೆರಿಗೆ ಮೇಲ್ಮನವಿ ಮಂಡಳಿಯಂತಹ ವಿಶೇಷ ನ್ಯಾಯಿಕ ಪ್ರಾಧಿಕಾರಗಳಿಗೆ ನೇಮಕಾತಿ ಮಾಡುವಂತೆ ವಿಶೇಷ ಕಾನೂನು ಹಾಗೂ ವಿಷಯ ತಜ್ಞತೆಯನ್ನು ಹೊಂದಿದ ನ್ಯಾಯಾಧೀಶರನ್ನು ವಾಣಿಜ್ಯ ನ್ಯಾಯಾಲಯಕ್ಕೆ ನ್ಯಾಯಾಧೀಶರನ್ನಾಗಿ ನೇಮಕ ಮಾಡಬೇಕು. ಅಗತ್ಯವಿದ್ದಲ್ಲಿ ವಿಶೇಷ ನ್ಯಾಯಾಂಗ ಸೇವೆಯನ್ನು ಆರಂಭಿಸಬೇಕು.

 

4.      ವಾಣಿಜ್ಯ ನ್ಯಾಯಾಲಯಗಳಲ್ಲಿ ದಾಖಲಾಗುವ ವ್ಯಾಜ್ಯಗಳನ್ನು ಆನ್‌ಲೈನ್‌ ಮೂಲಕ ದಿನದ ಇಪ್ಪತ್ತನಾಲ್ಕು ಗಂಟೆಯೂ ಸಲ್ಲಿಸುವಂತೆ ಮಾಹಿತಿ ತಂತ್ರಜ್ಞಾನ ಬಳಕೆಯಿಂದ ಸೂಕ್ತ ಮೂಲ ಸೌಕರ್ಯ ನಿರ್ಮಿಸಬೇಕು.

 

5.   ಭೌತಿಕ ದಾಖಲೆಗಳ ಬದಲಾಗಿ ಡಿಜಿಟಲೀಕರಣಗೊಂಡ ದಾಖಲೆಗಳನ್ನು ವಿಶೇಷ ಜಾಲತಾಣದ ಮೂಲಕ ಸಲ್ಲಿಸುವಂತಾಗಬೇಕು.

 

6.   ಪ್ರಕರಣಗಳನ್ನು ವಿಡಿಯೋ ಕಾನ್ಫೆರೆನ್ಸಿಂಗ್ ‌ವ್ಯವಸ್ಥೆಯ ಮೂಲಕವೇ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು. ಇದರಿಂದಾಗಿ ನ್ಯಾಯವು ಕಕ್ಷಿದಾರನ ಮನೆ ಬಾಗಿಲಿಗೆ ತಲುಪಲು ಸಾಧ್ಯವಿದೆ.

 

7.    ಕೃತಕ ಬುದ್ಧಿಮತ್ತೆಯನ್ನು ಆಧರಿಸಿ ಮಾಹಿತಿ ತಂತ್ರಜ್ಞಾನವನ್ನು ನ್ಯಾಯಾಂಗ ವ್ಯವಸ್ಥಗೆ ಅಂತರ್ಗತಗೊಳಿಸಬೇಕು. ತನ್ಮೂಲಕ ದಾಖಲೆಗಳನ್ನು ಕ್ಷಿಪ್ರವಾಗಿ ಪರಿಶೀಲಿಸುವ ಹಾಗೂ ನ್ಯಾಯಾಂಗೇತರ ವ್ಯವಹಾರಗಳನ್ನು ನಿರ್ವಹಿಸಲು ತಜ್ಞ ವ್ಯವಸ್ಥಾಪಕರನ್ನು ನೇಮಕ ಮಾಡಿ ವಾಣಿಜ್ಯ ನ್ಯಾಯಾಲಯದ ನ್ಯಾಯಾಧೀಶರ ಮೇಲಿನ ಒತ್ತಡವನ್ನು ಕಡಿಮೆಗೊಳಿಸಬೇಕು. (ಸಾಲ ವಸೂಲಾತಿ ಮಂಡಳಿಗಳಲ್ಲಿ ರಿಜಿಸ್ಟ್ರಾರ್‌ ಎಂಬ ಪ್ರತ್ಯೇಕ ಅಧಿಕಾರಿಯನ್ನು ನೇಮಿಸಿ ಪೀಠಾಸೀನ ಅಧಿಕಾರಿಗೆ ಸಹಾಯಕವಾಗಿ ಕಾರ್ಯನಿರ್ವಹಿಸುವಂತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ). ಇದರಿಂದಾಗಿ ಮದ್ಯಂತರ ಅರ್ಜಿ, ಕೆಲವು ಶಾಸನಾತ್ಮಕ ಅನುಷ್ಠಾನ ಪ್ರಕ್ರಿಯೆಗಳನ್ನು ಪೀಠಾಸೀನ ಅಧಿಕಾರಿಯಿಂದ ಮುಕ್ತಗೊಳಿಸಿ ವಾಣಿಜ್ಯ ನ್ಯಾಯಾಲಯದ ಕಛೇರಿಯ ಹಂತದಲ್ಲಿಯೇ ಇತ್ಯರ್ಥಪಡಿಸಲು ಅಥವಾ ತ್ವರಿತವಾಗಿ ಪೂರ್ಣಗೊಳಿಸಲು ಸಹಾಯಕವಾಗಲಿದೆ.

 

8.    ವಾಣಿಜ್ಯ ವ್ಯಾಜ್ಯಗಳ ನಿರ್ವಹಣೆಯು ಹೊಸ ತಲೆಮಾರಿನ ನ್ಯಾಯಾಂಗ ಸೇವೆಯಾಗಿರುವುದರಿಂದ, ಈ ಕುರಿತು ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ಗಳು ನೀಡಿರುವ ಪೂರ್ವೋದಾಹರಣೆ, ಮಹತ್ವವನ್ನು ಹೊಂದಿರುವ ತೀರ್ಪುಗಳನ್ನು ಜಾಲತಾಣದಲ್ಲಿ ವಕೀಲರಿಗೆ ಹಾಗೂ ನ್ಯಾಯಾಧೀಶರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವುದಲ್ಲದೆ ಪ್ರತೀ ಆರು ತಿಂಗಳಿಗೊಮ್ಮೆ ವಿಶೇಷ ತರಭೇತಿ ಕಾರ್ಯವನ್ನು ನಿರಂತರವಾಗಿ ವಕೀಲರ ಸಂಘದ ಮೂಲಕ ನಡೆಸಲು ವಕೀಲರ ಮಂಡಳಿಯು ಕಾನೂನು ಸೇವಾ ಪ್ರಾಧಿಕಾರದ ಜೊತೆಯಲ್ಲಿ ಜಂಟಿಯಾಗಿ ಯೋಜನೆಯನ್ನು ರೂಪಿಸಬೇಕು. 

 

ಕೇವಲ ಕಾಯ್ದೆಯನ್ನು ರೂಪಿಸಿ ಜಾಗತಿಕ ಮಟ್ಟದಲ್ಲಿ ರ‍್ಯಾಂಕಿಂಗ್ ಪಡೆಯಲು ಪ್ರಯತ್ನಿಸುವ ಬದಲು ಪ್ರಾಮಾಣಿಕವಾಗಿ ಕಾಯ್ದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರಗಳು ಪ್ರಯತ್ನಿಸಬೇಕು ಹಾಗೂ ಸೂಕ್ತ ಉಪಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದರೆ, ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಭಾರತಕ್ಕೆ ಲಭಿಸುವ ರ‍್ಯಾಂಕಿಂಗ್ ನಗೆಪಾಟಲಿಗೀಡಾಗಲಿದೆ. ಇದು ಸಂವಿಧಾನ ಹಾಗೂ ಕಾಯ್ದೆಯ ಆಶಯಕ್ಕೂ ಪೂರಕವಲ್ಲ.

 

ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ವಾಣಿಜ್ಯ ವ್ಯಾಜ್ಯ ಪ್ರಕರಣಗಳು ತನ್ನದೇ ರೀತಿಯಲ್ಲಿ ಪರಿಣಾಮವನ್ನು ಬೀರುವುದರಿಂದ, ನ್ಯಾಯಾಂಗದ ಕಾರ್ಯವೈಖರಿಯಿಂದಾಗಿ ದೇಶದ ಹಣಕಾಸು ವ್ಯವಸ್ಥೆಯ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತಿದೆ ಎಂಬ ಕುರಿತು ನೀತಿ ಆಯೋಗವು ಇತ್ತೀಚೆಗಷ್ಟೆ ಸಂಶೋಧನೆಯನ್ನು ಕೈಗೆತ್ತಿಕೊಂಡಿದೆ. ಈ ನಿಟ್ಟಿನಲ್ಲಿ ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹಾಗೂ ಕಾನೂನು ಇಲಾಖೆಗಳು ಸಹ ಜೊತೆಯಾಗಿ ನ್ಯಾಯಾಂಗದ ವೈಖರಿಯಿಂದ ಆರ್ಥಿಕ ವ್ಯವಸ್ಥೆಯ ಮೇಲಾಗುವ ಪರಿಣಾಮದ ಕುರಿತು ತಕ್ಷಣವೇ ಅಧ್ಯಯನ ನಡೆಸಿ ಸುಧಾರಣಾ ಕ್ರಮ ಕೈಗೊಳ್ಳುವುದು ಇಂದಿನ ತುರ್ತು ಅಗತ್ಯ.

 

ವಿವೇಕಾನಂದ ಪನಿಯಾಲ

ವಕೀಲರು

ಪನಿಯಾಲ & ಅಸೋಸಿಯೇಟ್ಸ್

paniyala.com